ಬುದ್ಧನ ಮಧ್ಯಮ ಮಾರ್ಗ ಅಥವಾ ಅಷ್ಟಾಂಗ ಮಾರ್ಗಗಳು ಇಂದಿಗೂ ಮನುಕುಲಕ್ಕೆ ಮಾದರಿಯಾಗಿವೆ.
1 ಸಮ್ಯಕ್ ದೃಷ್ಟಿ
ಅಂದರೆ ಮನುಷ್ಯನ ಕೊನೆಯಿಲ್ಲದ ಬೇಡಿಕೆಗಳು, ಲೋಭ, ದುರಾಸೆ ಮತ್ತು ಸ್ವಾರ್ಥ ಇವುಗಳನ್ನು ನಿರಾಕರಿಸುವುದರ ಮೂಲಕ ನಾವು ಕಂಡುಕೊಳ್ಳಬಹುದಾದ ಮನಸ್ಸಿನ ಶಾಂತಿಯ ಮಾರ್ಗ.
2 ಸಮ್ಯಕ್ ಸಂಕಲ್ಪ
ಬುದ್ಧನ ಪ್ರಕಾರ ಮನುಷ್ಯನಲ್ಲಿ ಕೇವಲ ಒಳ್ಳೆಯ ಚಿಂತನೆಗಳಿದ್ದರೆ ಸಾಲದು, ಅವುಗಳನ್ನು ಅನುಷ್ಠಾನಕ್ಕೆ ತರುವಂಥ ಸಂಕಲ್ಪವಿರಬೇಕು.
3 ಸಮ್ಯಕ್ ವಚನ
ವ್ಯಕ್ತಿಯೊಬ್ಬ ತನ್ನ ಚಿಂತನೆಗಳನ್ನು ಅಭಿವ್ಯಕ್ತಿಗೊಳಿಸಲು ಬಳಸುವ ಭಾಷೆಯಲ್ಲಿ ಎಚ್ಚರವಿರಬೇಕು. ಬಸವಣ್ಣ ಪ್ರತಿಪಾದಿಸಿದ “ಕಳಬೇಡ/ ಕೊಲಬೇಡ/ಹುಸಿಯ ನುಡಿಯಲು ಬೇಡ” ವಚನದ ಸಾಲುಗಳು ಬುದ್ಧನ ಚಿಂತನೆಯನ್ನು ಪ್ರತಿಪಾದಿಸುತ್ತವೆ. ಸುಳ್ಳಿನ ಮಾತುಗಳು ಮತ್ತು ಜಗಳಗಳಿಂದ ಸಂಘ ನಾಶವಾಗುತ್ತದೆ, ಹಿತಕರವಾದ ಮಾತುಗಳಿಂದ ಸ್ನೇಹ ಸಂಬಂಧಗಳು ಊರ್ಜಿತಗೊಳ್ಳುತ್ತವೆ.
4 ಸಮ್ಯಕ್ ಕರ್ಮ
ವ್ಯಕ್ತಿ ತಾನು ಪಡೆದ ಶಿಕ್ಷಣ ಅಥವಾ ಜ್ಞಾನ ಇವುಗಳಿಂದ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತಾನೆ. ಇದು ಆತನ ಸದಭಿರುಚಿಯ ನಡುವಳಿಕೆ ಮಾರ್ಗವಾಗುವುದರ ಮೂಲಕ ಶಾಂತಿಯುತ ಸಮಾಜ ನಿರ್ಮಾಣವಾಗುವುದರ ಜೊತೆಗೆ ಆತನೊಳಗಿನ ಕೆಟ್ಟಗುಣಗಳು ನಾಶವಾಗುತ್ತವೆ.
5 ಸಮ್ಯಕ್ ಜೀವನ
ಸಮ್ಯಕ್ ಜೀವನದ ಮೂಲಕ ಮನುಷ್ಯ ಹಿಂಸೆಯನ್ನು ತೊರೆದು ತ್ಯಾಗ ಜೀವನವನ್ನು ಅನುಸರಿಸಬೇಕೆಂದು ಪ್ರತಿಪಾದಿಸಿದ ಬುದ್ಧ , ತಾನು ಬದುಕಿದ್ದ ಕಾಲಘಟ್ಟದ ಸಮಾಜದ ಹಿಂಸೆ, ದರೋಡೆ ಇವುಗಳಿಂದ ನೊಂದು, ಮನುಷ್ಯ ಇತರರನ್ನು ದೋಚುವುದು ಇಲ್ಲವೆ, ಶೋಷಿಸುವುದನ್ನು ತೊರೆದು ಶ್ರಮದ ಸೂತ್ರಗಳನ್ನು ವೈಯಕ್ತಿಕ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ಇತ್ತನು.
6 ಸಮ್ಯಕ್ ವ್ಯಾಯಾಮ
ಉದ್ದೇಶಿತ ಗುರಿ ಸಾಧನೆಗೆ ಆರೋಗ್ಯ ಮುಖ್ಯ ಎಂದು ನಂಬಿದ್ದ ಬುದ್ಧನು ವ್ಯಾಯಾಮವನ್ನು ಪ್ರೋತ್ಸಾಹಿಸುವುದನು. ಇದರ ಜೊತೆಗೆ ತನ್ನ ಶಿಷ್ಯರಿಗೆ ಮತ್ತು ಪ್ರಜೆಗಳಿಗೆ ಸಾಮೂಹಿಕವಾಗಿ ವ್ಯಾಯಾಮದಲ್ಲಿ ತೊಡಗಿಕೊಳ್ಳುವುದು ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯಕ್ಕೆ ಒಳ್ಳೆಯದೆಂದು ಬೋಧಿಸಿದನು.
7 ಸಮ್ಯಕ್ ಸ್ಮೃತಿ
ಬುದ್ಧನ ದೃಷ್ಟಿಕೋನದಲ್ಲಿ ಉತ್ತಮ ಆಲೋಚನಾ ಗುಣಗಳಿದ್ದಾಗ ಮಾತ್ರ ಸದುದ್ದೇಶಗಳು ಇರಲು ಸಾಧ್ಯ. ಇಂತಹ ಉದಾತ್ತ ಚಿಂತನೆಗಳು ಮನುಷ್ಯನನ್ನು ಸಂಘ ಜೀವಿ ಮಾಡುವುದಲ್ಲದೆ, ಇದರಿಂದ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ ಎಂಬುದು ಆತನ ಬಲವಾದ ನಂಬಿಕೆಯಾಗಿತ್ತು.
8 ಸಮ್ಯಕ್ ಸಮಾಧಿ
ಅಂದರೆ, ಪ್ರಾಪಂಚಿಕ ಸುಖ ಮತ್ತು ಭೋಗಗಳಿಂದ ವಿಮುಖನಾಗಿ ತನ್ನ ಇಂದ್ರಿಯಗಳನ್ನು ನಿಗ್ರಹಿಸಿಕೊಂಡಾಗ ಮಾತ್ರ ಮನುಷ್ಯನಿಗೆ ಉಲ್ಲಾಸ ಅಥವಾ ನಿಜವಾದ ನೆಮ್ಮದಿ ದೊರೆಯಲು ಸಾಧ್ಯ.