Sunday, 11 November 2018

ಅತಿಮಾನುಷ ಶಕ್ತಿಯಲ್ಲಿ ನಂಬಿಕೆ ಇಡುವುದು ಧಮ್ಮವಲ್ಲ

1. ಯಾವಾಗಲಾದರೂ ಯಾವುದೇ ವಿದ್ಯಾಮಾನ ಸಂಭವಿಸಿದರೆ ಅದು ಹೇಗೆ ನಡೆಯಿತು, ಅದಕ್ಕೆ ಕಾರಣವೇನೆಂದು ತಿಳಿಯಲು ಮಾನವ ಜನಾಂಗ ಉತ್ಸುಕವಾಗಿರುತ್ತದೆ.
2. ಕೆಲವು ವೇಳೆ  ಕಾರಣಕ್ಕೂ ಪರಿಣಾಮಕ್ಕೂ ತೀರಾ ಸಾಮ್ಯತೆ ಮತ್ತು ನಿಕಟತೆ ಇರುವುದರಿಂದ ಆ ಘಟನೆ ನಡೆದುದನ್ನು ವಿವರಿಸಲು ಕಷ್ಟವಾಗುವಿದಿಲ್ಲ.
3. ಆದರೆ ಅನೇಕ ಸಲ ಕಾರಣದಿಂದ ಪರಿಣಾಮ ಬಹಳ ದೂರವಿರುವುದರಿಂದ ಪರಿಣಾಮವನ್ನು ವಿವರಿಸಲು ಆಗುವುದಿಲ್ಲ, ಸ್ಪಷ್ಟವಾಗಿ ಅಲ್ಲಿ ಕಾರಣವೇ ಗೋಚರಿಸುವುದಿಲ್ಲ.
4. ಆಗ ಪ್ರಶ್ನೆ ಏಳುತ್ತದೆ, ಹಾಗಾದರೆ ಹೇಗೆ ಇದು ನಡೆಯಿತು?
5. ಅಂಥ ಘಟನೆಗೆ ಏನೋ “ಅತಿಮಾನುಷ” ಶಕ್ತಿಯ ಕಾರಣವೆನ್ನುವುದು ಅತ್ಯಂತ ಸಾಧಾರಣವಾದ ಉತ್ತರ. ಅದನ್ನು ಸಾಮಾನ್ಯವಾಗಿ ಪವಾಡವೆನ್ನುತ್ತಾರೆ.
6. ಈ ಪ್ರಶ್ನೆಗೆ ಬುದ್ಧನಿಗಿಂತ ಹಿಂದಿನವರು ತೀರಾ ಭಿನ್ನ ಭಿನ್ನ ಉತ್ತರವನ್ನು ನೀಡಿದ್ದಾರೆ.
7. ಪ್ರತಿಯೊಂದು ಘಟನೆಗೂ ಕಾರಣವಿದೆ ಎನ್ನುವುದನ್ನು ಬುದ್ಧ ನಿರಾಕರಿಸಿದ. ಘಟನೆಗಳು ಸ್ವತಂತ್ರವಾಗಿ ಸಂಭವಿಸುತ್ತದೆಯೆಂದು ಆತ ಹೇಳಿದ.
8. ಘಟನೆಗೆ ಕಾರಣವಿರಲೇಬೇಕೆಂದು ಬುದ್ಧ ಒಪ್ಪಿದ್ದನು. ಆದರೆ ಕಾರಣವನ್ನು ಮಾನವ ಕರ್ತೃತ್ವದಲ್ಲಿ ಹುಡುಕಬಾರದು, ಅದನ್ನು ಪ್ರಕೃತಿಯಲ್ಲಿ, ನಿಯತಿಯಲ್ಲಿ, ವಸ್ತುಗಳ ಆಂತರಿಕ ನಿಯಮಗಳಲ್ಲಿ, ದೈವನಿರ್ಣಯದಲ್ಲಿ ಅಥವಾ ಅಂಥವುಗಳಲ್ಲಿ ಕಾಣಬೇಕಾಗುತ್ತದೆ ಎಂದು ಅವನು ಭೋಧಿಸಿದನು.
9. ಈ ಸಿದ್ದಾಂತಗಳನ್ನು ಬುದ್ಧ ಅಂಗೀಕರಿಸಲಿಲ್ಲ. ಪ್ರತಿಯೊಂದು ಘಟನೆಗೂ ಒಂದು ಕಾರಣವಿರುವುದಷ್ಟೇ ಅಲ್ಲ, ಈ ಕಾರಣ ಯಾವುದೇ ಮಾನವ ಕ್ರಿಯೆಯ ಅಥವಾ ನೈಸರ್ಗಿಕ ನಿಯಮದ ಫಲ ಎಂದು ಹೇಳಿದ.
10. ಒಂದು ಘಟನೆ ಸಂಭವಿಸಲು ಕಾಲ, ಪ್ರಕೃತಿ, ನಿಯತಿ ಇತ್ಯಾದಿ ಸಿದ್ದಾಂತಗಳು ಕಾರಣ ಎಂಬುದಕ್ಕೆ ವಿರುದ್ಧವಾದ ಆತನ ವಾದ ಈ ರೀತಿಯಾಗಿತ್ತು.
11. ಒಂದು ಘಟನೆ ಸಂಭವಿಸಲು ಕಾಲ, ಪ್ರಕೃತಿ, ನಿಯತಿ, ಇತ್ಯಾದಿಗಳು ಏಕೈಕ ಕಾರಣವಾದರೆ, ಆಗ ನಾವು ಯಾರು?
12. ಮನುಷ್ಯನಾದವನು ಕೇವಲ ಕಾಲ, ಪ್ರಕೃತಿ, ನಿಯತಿ, ಅದೃಷ್ಟ, ದೇವರುಗಳ ಕೈಗೊಂಬೆಯೇ?
13. ಮನುಷ್ಯ ಸ್ವತಂತ್ರನಾಗಿಲ್ಲ ಎಂದರೆ ಅವನ ಇರುವಿಕೆಯಿಂದ ಪ್ರಯೋಜನವೇನು? ಅತಿಮಾನುಷ ಕಾರಣಗಳನ್ನೆಲ್ಲಾ ಅವನು ನಂಬುತ್ತಾ ಹೋದರೆ ಅವನ ಬುದ್ದಿಶಕ್ತಿಯ ಪ್ರಯೋಜನಗಳೇನು?
14. ಮನುಷ್ಯ ಸ್ವತಂತ್ರನಾಗಿದ್ದರೆ ಆಗ ಎಲ್ಲಾ ಘಟನೆಗಳೂ ಅವನ ಕ್ರಿಯೆ ಅಥವಾ ಪ್ರಕೃತಿಯ ಕ್ರಿಯೆಯ ಫಲವಾಗಬೇಕಾಗುತ್ತದೆ. ಯಾವುದೇ ಘಟನೆಯೂ ತನ್ನ ಮೂಲದಲ್ಲಿ ಅತಿಮಾನುಷವಾಗಿರಲು ಸಾಧ್ಯವೇ ಇಲ್ಲ.
15. ಒಂದು ಘಟನೆಯ ಸಂಭವಕ್ಕೆ ಕಾರಣ ಕಂಡುಹಿಡಿಯಲು ಮನುಷ್ಯ ಸಮರ್ಥನಾಗದೇ ಇರಬಹುದು. ಆದರೆ ಅವನಿಗೆ ಬುದ್ದಿಶಕ್ತಿ ಇದ್ದರೆ ಅವನು ಒಂದಲ್ಲ ಒಂದು ದಿನ ಅದನ್ನು ಪತ್ತೆ ಹಚ್ಚಿಯೇ ಹಚ್ಚುತ್ತಾನೆ.
16. ಅತಿಮಾನುಷವಾದವನ್ನು ತಿರಸ್ಕರಿಸುವುದರಲ್ಲಿ ಬುದ್ಧನಿಗೆ ಮೂರು ಉದ್ದೇಶಗಳಿದ್ದವು.
17. ಮೊದಲನೇ ಉದ್ದೇಶ, ಮನುಷ್ಯನನ್ನು ವೈಚಾರಿಕ ಮಾರ್ಗದಲ್ಲಿ ನಡೆಸುವುದು.
18. ಎರಡನೇ ಉದ್ದೇಶ, ಸತ್ಯವನ್ನು ಅರಸಲು ಮನುಷ್ಯನನ್ನು ಸ್ವತಂತ್ರನನ್ನಾಗಿ ಮಾಡುವುದು.
19. ಮೂರನೇ ಉದ್ದೇಶ, ಅನ್ವೇಷಣಾ ಮನೋಭಾವವನ್ನು ಕೊಲ್ಲಲು ಕಾರಣವಾದ ಮೌಢ್ಯದ ಅತ್ಯಂತ ಮೂಲವನ್ನು ನಿರ್ಮೂಲ ಮಾಡುವುದು.
20. ಇದನ್ನೇ ಕಾರಣ ನಿಯಮವೆಂದು ಕರೆಯಲಾಗಿದೆ.
21. ಬುದ್ಧನ ಧಮ್ಮದಲ್ಲಿ ಕಾರಣ ಸಿದ್ದಾಂತವೇ ಅತ್ಯಂತ ಕೇಂದ್ರವಾದುದು. ಅದು ವಿಚಾರವನ್ನು ಭೋಧಿಸುತ್ತದೆ. ಬುದ್ಧ ಧಮ್ಮ ವಿಚಾರವಾದವಲ್ಲದಿದ್ದರೆ ಬೇರೇನೂ ಅಲ್ಲ.
22. ಆದ್ದರಿಂದಲೇ “ಅತಿಮಾನುಷ” ಶಕ್ತಿಯ ಆರಾಧನೆ ಧಮ್ಮವಲ್ಲ.

ಆಕರ- ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಸಮಗ್ರ ಬರಹಗಳು  ಮತ್ತು ಭಾಷಣಗಳು- ಸಂಪುಟ-10, ಭಾಗ-4. ಪು.ಸಂ-225,226.
☸(ಸಂಗ್ರಹ – ಭಾಸ್ಕರ್ ವಿಟ್ಲ)☸

Monday, 29 October 2018

ಹಿಂಸೆಯ ಬಗ್ಗೆ ಬುದ್ಧನ ಸ್ಪಷ್ಟನೆ


ಬುದ್ಧ ಹಿಂಸಾಚಾರವನ್ನು ವಿರೋಧಿಸಿದ. ಆದರೆ ಅವನು ನ್ಯಾಯದ ಪರವಾಗಿಯೂ ಕೂಡ ಇದ್ದನು. ನ್ಯಾಯ ಸ್ಥಾಪಿಸಬೇಕಾದ ಕಡೆ ಅವನು ಬಲ ಪ್ರಯೋಗಕ್ಕೆ ಅನುಮತಿ ಇತ್ತನು. ಇದು ಅವನು ವೈಶಾಲಿಯ ಸೇನಾಧಿಪತಿ ಸಿಂಹ ಸೇನಾಪತಿಯ ಜೊತೆ ನಡೆಸಿದ ಸಂವಾದದಲ್ಲಿ ಸೊಗಸಾಗಿ ಬಂದಿದೆ. ಬುದ್ಧ ಅಹಿಂಸೆ ಬೋಧಿಸುವುದನ್ನು ತಿಳಿದ ಸಿಂಹ ಅವನ ಬಳಿ ಹೋಗಿ ಕೇಳಿದನು:

ಸಿಂಹ ಸೇನಾಪತಿ : “ಬುದ್ಧ ಅಹಿಂಸೆಯನ್ನು ಬೋಧಿಸುತ್ತಾರೆ. ಅಪರಾಧಿಗೆ ಶಿಕ್ಷೆ ಕೊಡಬಾರದೆಂದು ಬುದ್ಧ ಬೋಧಿಸುತ್ತಾರೆಯೇ? ನಮ್ಮ ಮಡದಿ ಮಕ್ಕಳನ್ನು ನಮ್ಮ ಆಸ್ತಿಪಾಸ್ತಿಯನ್ನು ರಕ್ಷಿಸಲು ಯುದ್ಧ ಮಾಡಬಾರದೆಂದು ಬುದ್ಧ ಬೋಧಿಸುತ್ತಾರೆಯೆ? ಅಹಿಂಸೆಯ ಹೆಸರಿನಲ್ಲಿ ನಾವು ಅಪರಾಧಿಗಳ ಕೈಯಲ್ಲಿ ಹಿಂಸೆ ಅನುಭವಿಸಬೇಕೇ?”
“ಸತ್ಯ ಮತ್ತು ನ್ಯಾಯಗಳ ಹಿತದೃಷ್ಟಿಯಿಂದಲೂ ಕೂಡ ಬುದ್ಧ ಎಲ್ಲ ಯುದ್ಧವನ್ನೂ ನಿಷೇಧಿಸುತ್ತಾರೆಯೆ?”

ಬುದ್ಧ : “ನಾನು ಬೋಧಿಸುತ್ತಿರುವುದನ್ನು ನೀನು ತಪ್ಪಾಗಿ ತಿಳಿದುಕೊಂಡಿರುವೆ. ಅಪರಾಧಿಯನ್ನು ಶಿಕ್ಷಿಸಲೇಬೇಕು. ನಿರಪರಾಧಿಯನ್ನು ಬಿಡುಗಡೆ ಮಾಡಲೇ ಬೇಕು. ಅಪರಾಧಿಯನ್ನು ನ್ಯಾಯಾಧೀಶ ಶಿಕ್ಷಿಸುವುದು ದೋಷವಲ್ಲ. ಅಪರಾಧಿಯ ತಪ್ಪಿನಿಂದ ಶಿಕ್ಷೆಯುಂಟಾಗುತ್ತದೆ. ಶಿಕ್ಷೆಯನ್ನು ವಿಧಿಸುವ ನ್ಯಾಯಾಧೀಶ ಕಾನೂನನ್ನು ಮಾತ್ರ ಜಾರಿ ಮಾಡುತ್ತಿರುತ್ತಾನೆ. ಹಿಂಸಾಚರಣೆಯಿಂದ ಅವನು ಕಲುಷಿತನಾಗುವುದಿಲ್ಲ. ನ್ಯಾಯ ಮತ್ತು ರಕ್ಷಣೆಗಾಗಿ ಹೋರಾಡುವ ಮನುಷ್ಯನನ್ನು ಹಿಂಸಾವಾದಿಯೆಂದು ದೂಷಿಸಲು ಸಾಧ್ಯವಿಲ್ಲ. ಶಾಂತಿ ರಕ್ಷಣೆಯ ಎಲ್ಲಾ ಪ್ರಯತ್ನಗಳೂ ವಿಫಲವಾದಾಗ, ಯಾರು ಯುದ್ಧವನ್ನು ಪ್ರಾರಂಭಿಸಿದನೋ ಅವನ ಮೇಲೆ ಹಿಂಸೆಯ ಜವಾಬ್ದಾರಿ ಬೀಳುತ್ತದೆ. ಮನುಷ್ಯ ಎಂದೂ ದುಷ್ಟ ಶಕ್ತಿಗಳಿಗೆ ಶರಣಾಗತಬಾರದು. ಯುದ್ಧವಾಗಬಹುದು. ಆದರೆ ಅದು ಸ್ವಾರ್ಥ ಸಾಧನೆಯಾಗಿ ಆಗಬಾರದು….”

                       - ಬಾಬಾ ಸಾಹೇಬ್ ಅಂಬೇಡ್ಕರ್

ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಭಾಷಣಗಳು, ಸಂಪುಟ – 3, ಭಾಗ – ನಾಲ್ಕು, ಬುದ್ಧ ಅಥವಾ ಕಾರ್ಲ್ ಮಾರ್ಕ್ಸ್, ಪುಟ.473

Friday, 2 February 2018

ಧರ್ಮ ಮತ್ತು ಧಮ್ಮಕ್ಕೆ ಇರುವ ವ್ಯತ್ಯಾಸವೇನು???

ಜೀವನದಲ್ಲಿ ಪದೇ...ಪದೇ ತಪ್ಪುಗಳನ್ನು, ಪಾಪ ಕೃತ್ಯಗಳನ್ನು ಮಾಡುವುದು ಹಾಗೂ ಅದಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಹೋಮ,ಹವನ,ಜಪ,ತಪ ಪ್ರಾರ್ಥನೆ ಪೂಜೆ ಮತ್ತು ಧಾರ್ಮಿಕ ಗ್ರಂಥಗಳ ಪಠಣವನ್ನು ಮಾಡುವುದು. ಹಾಗೂ ಪರಿಹರಿಸಿಕೊಂಡ ನಂತರ  ಪುನಃ ಅದೇ ತಪ್ಪುಗಳನ್ನು, ಪಾಪಕೃತ್ಯಗಳನ್ನು ಮಾಡುವುದು ಮತ್ತದೇ ಪುನರಾವರ್ತನೆ ಎಂಬಂತೆ ಪ್ರಾಯಶ್ಚಿತಾರ್ಥಕ್ಕಾಗಿ ಪರಿಹಾರ ಕಾರ್ಯಗಳನ್ನು ಮಾಡುವುದನ್ನು ಧರ್ಮವೆನ್ನುತ್ತಾರೆ. 

ಆದರೆ ಧಮ್ಮವೆಂದರೆ ಹಾಗಲ್ಲ ಭಗವಾನ್  ಬುದ್ಧನು ಭೋದಿಸಿದ  ಪಂಚಶೀಲ ತತ್ವಗಳನ್ನು ಜೀವನದಲ್ಲಿ ಅಳವಡಿಸಿ ಕೊಂಡು ನಾವು ಜೀವನದಲ್ಲಿ  ತಪ್ಪುಗಳನ್ನು ಮಾಡದಂತೆ, ಪಾಪಕೃತ್ಯಗಳನ್ನು ಮಾಡದಂತೆ, ಬುದ್ಧನು ಜಗತ್ತಿಗೆ ಸಾರಿದ ಸಂದೇಶವಾದ ( ಸ್ವಾತಂತ್ರ್ಯ,ಸಮಾನತೆ,ಸಹೋದರತೆ) ಶಾಂತಿ,ಸಮತೆ,ಸಹೋದರತೆ,ಮೈತ್ರಿ ,ಪ್ರಜ್ಞೆ ಹಾಗೂ ಕರುಣೆಯ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುತ್ತಾ  ಬುದ್ಧನ ಪಥದಲ್ಲಿ ಸಾಗುವುದನ್ನು  ಧಮ್ಮವೆನ್ನುತ್ತಾರೆ.

ಇದು ಇತರೇ ಧರ್ಮಕ್ಕೂ ಮತ್ತು ಭಗವಾನ್ ಬುದ್ಧ ಪ್ರತಿಪಾದಿಸಿದ ಧಮ್ಮಕ್ಕೂ ಇರುವ ವ್ಯತ್ಯಾಸವಾಗಿದ್ದು  ಜಗತ್ತಿನ ಎಲ್ಲಾ ಧರ್ಮಗಳು ದೇವಕೇಂದ್ರಿತವಾಗಿದ್ದರೆ ಭಗವಾನ್  ಬುದ್ಧನ ಧಮ್ಮವು ಮಾನವ ಕೇಂದ್ರಿತವಾಗಿದೆ...☸ 

☸ಧಮ್ಮಾನಂದ ಬೆಳ್ತಂಗಡಿ☸

ಅಂಗುಲಿಮಾಲನ ಕಥೆ


ಭಗವಾನ್ ಬುದ್ಧ ಇದ್ದ ಕಾಲದಲ್ಲಿ ಅಂಗುಲಿಮಾಲ ಎನ್ನುವ ಕುಖ್ಯಾತ ದರೋಡೆಕೋರನೂ ಇದ್ದ.ಆತ ಕಾಡಿನಲ್ಲಿ ಹಾದುಹೋಗುತ್ತಿದ್ದ ಜನರನ್ನು ಸುಲಿಗೆ ಮಾಡುತ್ತಿದ್ದ.ಅಷ್ಟೇ ಅಲ್ಲದೆ ಅವರ ಕೈ ಬೆರಳುಗಳನ್ನು ಕತ್ತರಿಸಿ ಅದನ್ನು ತನ್ನ ಕೊರಳಿಗೆ ಹಾರವನ್ನಾಗಿ ಮಾಡಿ ಹಾಕಿಕೊಳ್ಳುತ್ತಿದ್ದ.ಹೀಗಾಗಿಯೇ ಅವನಿಗೆ ಅಂಗುಲಿಮಾಲ ಎನ್ನುವ ಹೆಸರು ಬಂತು.ಹೀಗಿರಲು ಒಮ್ಮೆ ಭಗವಾನ್ ಬುದ್ಧರಿಗೆ ಕಾಡಿನ ಮೂಲಕ ಹಾದುಹೋಗಬೇಕಾಗಿ ಬಂತು.
ಅವರ ಶಿಷ್ಯರೆಲ್ಲರೂ ಭಯಗ್ರಸ್ಥರಾಗಿ ಹಿಂದೆ ಸರಿದರು, ಬುದ್ಧರಿಗೂ ಅಂಗುಲಿಮಾಲನ ಬಗ್ಗೆ ತಿಳಿಸಿದರು. ಆದರೆ ಬುದ್ಧ ತಮ್ಮ ನಿರ್ಧಾರದಲ್ಲಿ ಆಚಲರಾಗಿದ್ದರು. ಅವರು ಪ್ರಯಾಣಿಸುತ್ತಿದ್ದಾಗ ಶಿಷ್ಯರು ಹೆದರಿದಂತೆ ಅಂಗುಲಿಮಾಲ ಬುದ್ಧನಿಗೆ ತಡೆ ಒಡ್ಡಿದ. ಆದರೆ ಬುದ್ಧ ನಸುನಗುತ್ತಲೇ ಆತನಿಗೆ ತನ್ನ ಬಳಿ ಇದ್ದ ಎಲ್ಲಾ ವಸ್ತುವನ್ನೂ ನೀಡಿದರು. ಅಂಗುಲಿಮಾಲನಿಗೆ ಆಶ್ಚರ್ಯವೋ ಆಶ್ಚರ್ಯ.
ಆತ ಬುದ್ಧ ಅವರ ಮಾತಿಗೆ ಮನಸೋಲುತ್ತಾನೆ. ನಂತರ ಅವರಿಗೆ ಏನು ಬೇಕೆಂದು ಕೇಳುತ್ತಾನೆ.ಆಗ ಬುದ್ಧ ಅವರು ಎದುರಿಗಿದ್ದ ಮರವನ್ನು ತೋರಿಸಿ ಅದರ ಎಲೆಗಳನ್ನು ತಂದುಕೊಡುವಂತೆ ಕೇಳುತ್ತಾರೆ.ಅಂಗುಲಿಮಾಲನಿಗೆ ನಗಲು ಬಂದರೂ ಆತ ಎಲೆಗಳನ್ನು ಕಿತ್ತು ತಂದು ಬುದ್ಧನ ಕೈಯಲ್ಲಿ ಇಡುತ್ತಾನೆ.
ನಂತರ ಬುದ್ಧ ಅವರು ಅಂಗುಲಿಮಾಲನ ಬಳಿ ಅವನ್ನೆಲ್ಲ ಮಾತೆ ಸ್ವಸ್ಥಾನದಲ್ಲಿ ಇಡಲು ತಿಳಿಸುತ್ತಾರೆ. ಈಗ ಅಂಗುಲಿಮಾಲನಿಗೆ ಆಘಾತವಾಗುತ್ತದೆ.ಒಮ್ಮೆ ಕಿತ್ತ ಎಲೆಗಳನ್ನು ಮತ್ತೆ ಹೇಗೆ ಮರದಲ್ಲಿ ಇಡಲು ಸಾಧ್ಯ? ಎಂದು ಬುದ್ಧನನ್ನೇ ಪ್ರಶ್ನಿಸುತ್ತಾನೆ. ಆಗ ಬುದ್ಧ ಹೇಳುತ್ತಾನೆ "ಜೀವ ತೆಗೆಯುವುದು ತುಂಬಾ ಸುಲಭ. ಆದರೆ ಜೀವ ನೀಡುವುದು ಅಷ್ಟೇ ಕಷ್ಟ"ಎಂದು ತಿಳಿ ಹೇಳುತ್ತಾರೆ.
ಅವರ ಮಾತಿನ ಅಂತರ್ಯವನ್ನು ಅರ್ಥ ಮಾಡಿಕೊಂಡ ಅಂಗುಲಿಮಾಲ ಅವರ ಶಿಷ್ಯನಾಗುತ್ತಾನೆ. ತನ್ನ ಕೆಟ್ಟ ಕೆಲಸಗಳಿಗೆ ಪಶ್ಚಾತ್ತಾಪ  ಪಡುತ್ತಾನೆ.

Thursday, 1 February 2018

ಅಷ್ಟಾಂಗ ಮಾರ್ಗ


ಬುದ್ಧನ ಮಧ್ಯಮ ಮಾರ್ಗ ಅಥವಾ ಅಷ್ಟಾಂಗ ಮಾರ್ಗಗಳು ಇಂದಿಗೂ ಮನುಕುಲಕ್ಕೆ ಮಾದರಿಯಾಗಿವೆ.
1 ಸಮ್ಯಕ್ ದೃಷ್ಟಿ

ಅಂದರೆ ಮನುಷ್ಯನ ಕೊನೆಯಿಲ್ಲದ ಬೇಡಿಕೆಗಳು, ಲೋಭ, ದುರಾಸೆ ಮತ್ತು ಸ್ವಾರ್ಥ ಇವುಗಳನ್ನು ನಿರಾಕರಿಸುವುದರ ಮೂಲಕ ನಾವು ಕಂಡುಕೊಳ್ಳಬಹುದಾದ ಮನಸ್ಸಿನ ಶಾಂತಿಯ ಮಾರ್ಗ.
ಸಮ್ಯಕ್ ಸಂಕಲ್ಪ

ಬುದ್ಧನ ಪ್ರಕಾರ ಮನುಷ್ಯನಲ್ಲಿ ಕೇವಲ ಒಳ್ಳೆಯ ಚಿಂತನೆಗಳಿದ್ದರೆ ಸಾಲದು, ಅವುಗಳನ್ನು ಅನುಷ್ಠಾನಕ್ಕೆ ತರುವಂಥ ಸಂಕಲ್ಪವಿರಬೇಕು.
3 ಸಮ್ಯಕ್ ವಚನ

ವ್ಯಕ್ತಿಯೊಬ್ಬ ತನ್ನ ಚಿಂತನೆಗಳನ್ನು ಅಭಿವ್ಯಕ್ತಿಗೊಳಿಸಲು ಬಳಸುವ ಭಾಷೆಯಲ್ಲಿ ಎಚ್ಚರವಿರಬೇಕು. ಬಸವಣ್ಣ ಪ್ರತಿಪಾದಿಸಿದ “ಕಳಬೇಡ/ ಕೊಲಬೇಡ/ಹುಸಿಯ ನುಡಿಯಲು ಬೇಡ” ವಚನದ ಸಾಲುಗಳು ಬುದ್ಧನ ಚಿಂತನೆಯನ್ನು ಪ್ರತಿಪಾದಿಸುತ್ತವೆ. ಸುಳ್ಳಿನ ಮಾತುಗಳು ಮತ್ತು ಜಗಳಗಳಿಂದ ಸಂಘ ನಾಶವಾಗುತ್ತದೆ, ಹಿತಕರವಾದ ಮಾತುಗಳಿಂದ ಸ್ನೇಹ ಸಂಬಂಧಗಳು ಊರ್ಜಿತಗೊಳ್ಳುತ್ತವೆ.
ಸಮ್ಯಕ್ ಕರ್ಮ

ವ್ಯಕ್ತಿ ತಾನು ಪಡೆದ ಶಿಕ್ಷಣ ಅಥವಾ ಜ್ಞಾನ ಇವುಗಳಿಂದ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತಾನೆ. ಇದು ಆತನ ಸದಭಿರುಚಿಯ ನಡುವಳಿಕೆ ಮಾರ್ಗವಾಗುವುದರ ಮೂಲಕ ಶಾಂತಿಯುತ ಸಮಾಜ ನಿರ್ಮಾಣವಾಗುವುದರ ಜೊತೆಗೆ ಆತನೊಳಗಿನ ಕೆಟ್ಟಗುಣಗಳು ನಾಶವಾಗುತ್ತವೆ.
ಸಮ್ಯಕ್ ಜೀವನ

ಸಮ್ಯಕ್ ಜೀವನದ ಮೂಲಕ ಮನುಷ್ಯ ಹಿಂಸೆಯನ್ನು ತೊರೆದು ತ್ಯಾಗ ಜೀವನವನ್ನು ಅನುಸರಿಸಬೇಕೆಂದು ಪ್ರತಿಪಾದಿಸಿದ ಬುದ್ಧ , ತಾನು ಬದುಕಿದ್ದ ಕಾಲಘಟ್ಟದ ಸಮಾಜದ ಹಿಂಸೆ, ದರೋಡೆ ಇವುಗಳಿಂದ ನೊಂದು, ಮನುಷ್ಯ ಇತರರನ್ನು ದೋಚುವುದು ಇಲ್ಲವೆ, ಶೋಷಿಸುವುದನ್ನು ತೊರೆದು ಶ್ರಮದ ಸೂತ್ರಗಳನ್ನು ವೈಯಕ್ತಿಕ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ಇತ್ತನು.

ಸಮ್ಯಕ್ ವ್ಯಾಯಾಮ

ಉದ್ದೇಶಿತ ಗುರಿ ಸಾಧನೆಗೆ ಆರೋಗ್ಯ ಮುಖ್ಯ ಎಂದು ನಂಬಿದ್ದ ಬುದ್ಧನು ವ್ಯಾಯಾಮವನ್ನು ಪ್ರೋತ್ಸಾಹಿಸುವುದನು. ಇದರ ಜೊತೆಗೆ ತನ್ನ ಶಿಷ್ಯರಿಗೆ ಮತ್ತು ಪ್ರಜೆಗಳಿಗೆ ಸಾಮೂಹಿಕವಾಗಿ ವ್ಯಾಯಾಮದಲ್ಲಿ ತೊಡಗಿಕೊಳ್ಳುವುದು ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯಕ್ಕೆ ಒಳ್ಳೆಯದೆಂದು ಬೋಧಿಸಿದನು.
ಸಮ್ಯಕ್ ಸ್ಮೃತಿ

ಬುದ್ಧನ ದೃಷ್ಟಿಕೋನದಲ್ಲಿ ಉತ್ತಮ ಆಲೋಚನಾ ಗುಣಗಳಿದ್ದಾಗ ಮಾತ್ರ ಸದುದ್ದೇಶಗಳು ಇರಲು ಸಾಧ್ಯ. ಇಂತಹ ಉದಾತ್ತ ಚಿಂತನೆಗಳು ಮನುಷ್ಯನನ್ನು ಸಂಘ ಜೀವಿ ಮಾಡುವುದಲ್ಲದೆ, ಇದರಿಂದ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ ಎಂಬುದು ಆತನ ಬಲವಾದ ನಂಬಿಕೆಯಾಗಿತ್ತು.
ಸಮ್ಯಕ್ ಸಮಾಧಿ

ಅಂದರೆ, ಪ್ರಾಪಂಚಿಕ ಸುಖ ಮತ್ತು ಭೋಗಗಳಿಂದ ವಿಮುಖನಾಗಿ ತನ್ನ ಇಂದ್ರಿಯಗಳನ್ನು ನಿಗ್ರಹಿಸಿಕೊಂಡಾಗ ಮಾತ್ರ ಮನುಷ್ಯನಿಗೆ ಉಲ್ಲಾಸ ಅಥವಾ ನಿಜವಾದ ನೆಮ್ಮದಿ ದೊರೆಯಲು ಸಾಧ್ಯ.

Monday, 29 January 2018

ವಂದನೆ


ನಮೋ ತಸ್ಸ ಭಗವತೋ ಅರಹತೋ ಸಮ್ಮಾ ಸಂಬುದ್ಧಸ್ಸ
ನಮೋ ತಸ್ಸ ಭಗವತೋ ಅರಹತೋ ಸಮ್ಮಾ ಸಂಬುದ್ಧಸ್ಸ
ನಮೋ ತಸ್ಸ ಭಗವತೋ ಅರಹತೋ ಸಮ್ಮಾ ಸಂಬುದ್ಧಸ್ಸ

ಅರ್ಥ

ಭಗವಂತರೂ ಅರಹಂತರೂ ಆದ ಸಮ್ಯಕ್ ಸಂಬುದ್ಧರಿಗೆ ನಮನಗಳು
ಭಗವಂತರೂ ಅರಹಂತರೂ ಆದ ಸಮ್ಯಕ್ ಸಂಬುದ್ಧರಿಗೆ ನಮನಗಳು
ಭಗವಂತರೂ ಅರಹಂತರೂ ಆದ ಸಮ್ಯಕ್ ಸಂಬುದ್ಧರಿಗೆ ನಮನಗಳು

ಅತಿಮಾನುಷ ಶಕ್ತಿಯಲ್ಲಿ ನಂಬಿಕೆ ಇಡುವುದು ಧಮ್ಮವಲ್ಲ

1. ಯಾವಾಗಲಾದರೂ ಯಾವುದೇ ವಿದ್ಯಾಮಾನ ಸಂಭವಿಸಿದರೆ ಅದು ಹೇಗೆ ನಡೆಯಿತು, ಅದಕ್ಕೆ ಕಾರಣವೇನೆಂದು ತಿಳಿಯಲು ಮಾನವ ಜನಾಂಗ ಉತ್ಸುಕವಾಗಿರುತ್ತದೆ. 2. ಕೆಲವು ವೇಳೆ  ಕಾರಣಕ್...